ರಾಜ ಅಯ್ಯಂಗಾರ್, ಬಿ ಎಸ್ 
ಕರ್ನಾಟಕ ಸಂಗೀತ ವಿದ್ವಾಂಸರು. ರಂಗಭೂಮಿ ಹಾಗೂ ಚಲನಚಿತ್ರ ನಟರು. ಹಾಸನ ಜಿಲ್ಲೆಯ ಬಾಣಾವರದಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸರಂಗಾಚಾರ್. ರಾಜ ಅಯ್ಯಂಗಾರ್ ಅವರು ಚಿಕ್ಕವರಾಗಿದ್ದಾಗಲೇ ತಂದೆ ತೀರಿಕೊಂಡದ್ದರಿಂದ ತಾಯಿ ತಮ್ಮ ಮಕ್ಕಳೊಂದಿಗೆ ತವರೂರಾದ ಹೊಳಲ್ಕೆರೆ ಸೇರಿದರು. ಅಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ಚಿತ್ರದುರ್ಗದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಚಿಕ್ಕಂದಿನಲ್ಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು ಒಮ್ಮೆ ದಸರಾ ನೋಡಲು ತಮ್ಮ ಸೋದರ ಮಾವನೊಂದಿಗೆ ಮೈಸೂರಿಗೆ ಹೋಗಿದ್ದಾಗ ಅಲ್ಲಿ ಇವರಿಗೆ ಸುಪ್ರಸಿದ್ಧ ನಟರಾದ ವರದಾಚಾರ್ಯರ ಸಾನಿಧ್ಯ ಲಭಿಸಿತು. ವರದಾಚಾರ್ಯರ ಕಂಪನಿಯಲ್ಲೇ ಇವರು ಉಳಿದುಕೊಂಡು, ಅವರ ಪ್ರೋತ್ಸಾಹದಿಂದ ಮೆಟ್ರಿಕ್ಯುಲೇಷನ್‍ವರೆಗೆ ಶಿಕ್ಷಣ ಮುಂದುವರೆಸಿದರು. ಆ ವೇಳೆಗೆ ಇವರಿಗೆ ಸಂಗೀತದ ಆಸಕ್ತಿ ವಿಶೇಷವಾಗಿ ಬೆಳೆಯಿತು. ಶಾಮರಾವ್ ಎಂಬವರಲ್ಲಿ ಹಲವು ವರ್ಷಗಳ ಕಾಲ ಇವರು ಕರ್ನಾಟಕ ಸಂಗೀತವನ್ನು ಶಾಸ್ತ್ರೋಕ್ತವಾಗಿ ಅಭ್ಯಾಸ ಮಾಡಿದರು. ಅನಂತರ ಕಂಪನಿಯನ್ನು ಬಿಟ್ಟು ಬೆಂಗಳೂರಿನಲ್ಲಿ ಸಂಗೀತಶಾಲೆಯೊಂದನ್ನು ಆರಂಭಿಸಿದರು. ಆದರೆ ಈ ಶಾಲೆ ಬಹಳ ಕಾಲ ನಡೆಯಲಿಲ್ಲ. ಸಂಗೀತದ ಅಭ್ಯಾಸವನ್ನು ಮುಂದುವರಿಸಬೇಕೆಂಬ ಉದ್ದೇಶದಿಂದ ಇವರು ಮದರಾಸಿನಲ್ಲಿ ಸುಪ್ರಸಿದ್ಧ ಸಂಗೀತ ವಿದ್ವಾಂಸ ಟೈಗರ್ ವರದಾಚಾರ್ಯರ ಸಹೋದರ ಕೆ.ವಿ. ಶ್ರೀನಿವಾಸಯ್ಯಂಗಾರ್ ಅವರ ಶಿಷ್ಯರಾದರು. ಅನೇಕ ವರ್ಷಗಳ ಸಾಧನೆಯಿಂದ ಇವರು ಟೈಗರ್ ಸಂಪ್ರದಾಯದ ಘನವಿದ್ವಾಂಸರಾದರು. ಮದರಾಸಿನ ಪ್ರಸಿದ್ಧ ಸಭೆಯೊಂದರ ಆಶ್ರಯದಲ್ಲಿ ಇವರು ನಡೆಸಿದ ಪ್ರಥಮ ಸಂಗೀತ ಕಚೇರಿ (1926) ತುಂಬ ಯಶಸ್ವಿಯಾಯಿತು. ಆ ಸಭೆಯಲ್ಲಿದ್ದ ಟೈಗರ್ ವರದಾಚಾರ್ಯರು ಇವರ ಪ್ರತಿಭೆಯನ್ನು ಬಹಳ ಮೆಚ್ಚಿಕೊಂಡರು. ಅಲ್ಲಿಂದ ಮುಂದೆ ಅನೇಕ ಕಡೆಗಳಲ್ಲಿ ರಾಜ ಅಯ್ಯಂಗಾರರ ಕಚೇರಿಗಳು ನಡೆದವು. 1927 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಆಶ್ರಯದಲ್ಲಿ ಏರ್ಪಾಟಾಗಿದ್ದ ಸಂಗೀತ ಸಭೆಯೊಂದರಲ್ಲಿ ಇವರಿಗೆ ಚಿನ್ನದ ಪದಕ ದೊರಕಿತು. ಕುಂಭಕೋಣದ ಮಹಾಮಾಘಂ ಉತ್ಸವದಲ್ಲಿ ನಡೆದ ಕಚೇರಿಯು ಇವರ ಸಂಗೀತ ಜೀವನದ ಒಂದು ಮೈಲಿಗಲ್ಲು. 1929ರಲ್ಲಿ ಆಗಿನ ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಇವರು ಹಾಡಿದಾಗ ರಾಜರು ಮೆಚ್ಚಿಕೊಂಡರು. ಇವರನ್ನು ಇನ್ನೊಮ್ಮೆ ಕರೆಸಿಕೊಂಡು ಖಾಸಗಿಯಾಗಿ ಹಾಡಿಸಿ ಕೇಳಿ ಸಂತೋಷಪಟ್ಟು ಇವರಿಗೆ ವಿಶೇಷ ಸನ್ಮಾನ ಮಾಡಿದರು. ತಿರುವಾಂಕೂರು ಮಹಾರಾಜರು ಮೆಚ್ಚುಗೆಯ ಕುರುಹಾಗಿ ಇವರಿಗೆ ಸುವರ್ಣಪದಕ ನೀಡಿದರು. ರಾಜ ಅಯ್ಯಂಗಾರ್ ಅವರು ಭಾರತದ ನಾನಾ ಕಡೆ ಕಚೇರಿಗಳಲ್ಲಿ ಹಾಡಿದರು. ಬರ್ಮದಲ್ಲೂ ಕಛೇರಿಗಳೂ ನಡೆದವು. ರಂಗೂನಿನ ಸಂಗೀತ ಪ್ರಿಯರಿಂದ ಇವರಿಗೆ ಬಂಗಾರದ ಪದಕ ಲಭಿಸಿತು. 1945 ರಲ್ಲಿ ಮದರಾಸಿನಲ್ಲಿ ನಡೆದ 29 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಾನಕಲಾನಿಧಿ ಎಂಬ ಬಿರುದನ್ನೂ, ಚಿನ್ನದ ಪದಕವನ್ನೂ ನೀಡಿ ಗೌರವಿಸಲಾಯಿತು. ಮದರಾಸಿನ ಮ್ಯೂಸಿಕ್ ಅಕಾಡೆಮಿ ಇವರಿಗೆ ವಿದ್ವತ್ ಪದಕ ನೀಡಿತು. ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್ತು ಇವರನ್ನು 1970ರಲ್ಲಿ ಸನ್ಮಾನಿಸಿದೆ. ಕರ್ನಾಟಕ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಇವರಿಗೆ ಪ್ರಾಪ್ತವಾಗಿದೆ.

ರಾಜ ಅಯ್ಯಂಗಾರ್ ಅವರ `ಆಡಿಸಿದಳು ಯಶೋಧಾ ಎಂಬ ಪುರಂದರದಾಸರ ದೇವರನಾಮದ ಧ್ವನಿಮುದ್ರಿಕೆ ಬಹಳ ಜನಪ್ರಿಯವಾಗಿದೆ. ಇದು ಇವರ ಕಂಚಿನ ಕಂಟ, ಶಾಸ್ತ್ರಶುದ್ಧ ಲಯe್ಞÁನ ಭಾವಪೂರ್ಣತೆ ಇವುಗಳಿಗೆ ನಿದರ್ಶನವಾಗಿದೆ. ಅಷ್ಟೇ ಅಚ್ಚುಕಟ್ಟಾಗಿ ಇವರು ಹಾಡಿರುವ ಇನ್ನೊಂದು ಕೃತಿ `ಕ್ಷೀರಸಾಗರಶಯನ. ಇದೂ ಧ್ವನಿಮುದ್ರಿಕೆಯಾಗಿದೆ.
ಅತ್ಯಂತ ಶಿಸ್ತಿನ ಜೀವನ ನಡೆಸುತ್ತ, ಶ್ರದ್ದೆಯಿಂದ ತಮ್ಮ ಕಂಠ ಸಿರಿಯನ್ನು ಪೋಷಿಸಿಕೊಂಡು ಬಂದ ರಾಜ ಅಯ್ಯಂಗಾರ್ ಅವರು ಸಂಗೀತದಲ್ಲಿ ಹಳೆಯಕಾಲದ ಗುರುಕುಲ ಪದ್ಧತಿಯಲ್ಲಿ ನಂಬಿಕೆ ಇಟ್ಟವರಾಗಿದ್ದರು. ಸಂಗೀತಗಾರರಾಗಬಯಸುವವರು ಚಿಕ್ಕಂದಿನಿಂದಲೇ ಸಾಧನೆ ಮಾಡಬೇಕು ಎಂಬುದು ಇವರ ಅಭಿಪ್ರಾಯ. ಸಂಗೀತಕಚೇರಿಗಳು ಸಂಪ್ರದಾಯವನ್ನು ಬಿಟ್ಟು ನಡೆಯಬಾರದು ಎಂಬುದು ಇವರ ವಾದ. ಕ್ರಮಬದ್ಧವಾಗಿ ನಡೆಯುವ ಕಚೇರಿಗಳು ರಸಪೋಷಣೆಗೆ ಸಹಾಯಕವಾಗುತ್ತವೆ ಎಂದು ಭಾವಿಸಿದ್ದ ಇವರು ಯಾವುದೇ ಕಚೇರಿಗಾದರೂ ಪೂರ್ವಸಿದ್ಧತೆ ಮಾಡಿಕೊಂಡೇ ಹೋಗುವ ಪದ್ಧತಿ ಅನುಸರಿಸಿದವರು. ವಾಗ್ಗೇಯಕಾರರು ನಿರ್ದೇಶಿಸಿರುವ ರಾಗಗಳಲ್ಲೇ ಕೃತಿಗಳನ್ನು ಹಾಡಬೇಕೆಂಬುದೂ ಕಚೇರಿಗಳಲ್ಲಿ ಹಾಡುವವರು ಪಕ್ಕ ವಾದ್ಯಗಾರರ ಮನೋಧರ್ಮವನ್ನೂ ಸಾಮಥ್ರ್ಯವನ್ನೂ ಅರಿತುಕೊಂಡು ಅವು ಪೂರ್ಣವಾಗಿ ಪ್ರಕಟವಾಗುವಂತೆ ನೆರವಾಗಬೇಕೆಂಬುದೂ ಇವರ ಅಭಿಮತ. ಪುರಂದರ ದಾಸರ ಕೃತಿಗಳನ್ನು ಜನಪ್ರಿಯಗೊಳಿಸಲು ಇವರು ವಿಶೇಷವಾದ ಶ್ರಮವಹಿಸಿದ್ದಾರೆ. ಕನ್ನಡ ಕೃತಿಗಳ ಹಾಡುಗಾರಿಕೆ ಇವರಿಗೆ ತುಂಬ ಅಚ್ಚುಮೆಚ್ಚಾಗಿತ್ತು.

ರಾಜ ಅಯ್ಯಂಗಾರ್ ಅವರು ಚಲನಚಿತ್ರ ಕ್ಷೇತ್ರದಲ್ಲಿಯೂ ಕೆಲಸ ಮಾಡಿದರು. ಕನ್ನಡದ ಪ್ರಸಿದ್ಧ ಚಿತ್ರಗಳಲ್ಲೊಂದಾದ `ಹರಿಶ್ಚಂದ್ರದಲ್ಲಿ ಇವರು ನಾರದನ ಪಾತ್ರವನ್ನೂ ತಮಿಳಿನ `ತುಳಸೀದಾಸದಲ್ಲಿ ತುಳಸೀದಾಸನ ಪಾತ್ರವನ್ನೂ ತೆಲುಗಿನ `ತುಲಸಿಜಲಂಧರದಲ್ಲಿ ಸಾಧುವಿನ ಪಾತ್ರವನ್ನೂ ವಹಿಸಿ ಉತ್ತಮ ಅಭಿನಯ ನೀಡಿದ್ದಾರೆ. ಇವರು 1978 ಜುಲೈ 4ರಂದು ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ